Pitruganasandhi-Kannada-Harikatmarutasara

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ

ರಚನೆ : ಶ್ರೀ ಜಗನ್ನಾಥದಾಸರು

Click to buy Full Harikathamrutasara Kannada Ebook (all 32 sandhi)

You can look at Pitrugana Sandhi in English

You can look at Vighneshwara Stotra Sandhi in English/Kannada

Also read Mangalacharana Sandhi and Karuna Sandhi

Pitrugana Sandhi -Harikathamrutasara – Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಕೃತಿರಮಣ ಪ್ರದ್ಯುಮ್ನ ವಸುದೇವತೆಗಳು ಅಹಂಕಾರ ತ್ರಯದೊಳು
ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು
ಹುತವಹಾಕ್ಷ ಅಂತರ್ಗತ ಜಯಾಪತಿಯು ತಾನೇ ಮೂರಧಿಕ ತ್ರಿಂಶತಿ ಸುರೂಪದಿ
ಭೋಕ್ತ್ರು ಎನಿಸುವ ಭೋಕ್ತ್ರುಗಳೊಳಿದ್ದು||1||

ಆರಧಿಕ ಮೂವತ್ತು ರೂಪದಿ ವಾರಿಜಾಪ್ತನೊಳು ಇರುತಿಹನು
ಮಾಯಾರಮಣ ಶ್ರೀ ವಾಸುದೇವನು ಕಾಲನಾಮದಲಿ
ಮೂರುವಿಧ ಪಿತೃಗಳೊಳು ವಸು ತ್ರಿಪುರಾರಿ ಆದಿತ್ಯಗ ಅನಿರುದ್ಧನು
ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನು ಎನಿಸಿಕೊಂಬ||2||

ಸ್ವವಶ ನಾರಾಯಣನು ತಾ ಷಣ್ಣವತಿ ನಾಮದಿ ಕರೆಸುತಲಿ
ವಸು ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು
ನೆವನವಿಲ್ಲದೆ ನಿತ್ಯದಲಿ ತನ್ನವರು ಮಾಡುವ ಸೇವೆ ಕೈಕೊಂಡು
ಅವರ ಪಿತೃಗಳಿಗೀವ ಅನಂತಾನಂತ ಸುಖಗಳನು||3||

ತಂತು ಪಟದಂದದಲಿ ಲಕ್ಷ್ಮೀಕಾಂತ ಪಂಚಾತ್ಮಕನು ಎನಿಸಿ
ವಸು ಕಂತು ಹರ ರವಿ ಕರ್ತೃಗಳೊಳಿದ್ದು
ಅನವರತ ತನ್ನ ಚಿಂತಿಸುತ ಸಂತರನು ಗುರು ಮಧ್ವಾಂತರಾತ್ಮಕ ಸಂತೈಸುವನು
ಸಂತತ ಅಖಿಳಾರ್ಥಗಳ ಪಾಲಿಸಿ ಇಹ ಪರಂಗಳಲಿ||4||

ತಂದೆ ತಾಯ್ಗಳ ಪ್ರೀತಿಗೋಸುಗ ನಿಂದ್ಯ ಕರ್ಮವ ತೊರೆದು
ವಿಹಿತಗಳು ಒಂದು ಮೀರದೆ ಸಾಂಗ ಕರ್ಮಗಳನು ಆಚರಿಸುವವರು
ವಂದನೀಯರಾಗಿ ಇಳೆಯೊಳಗೆ ದೈನಂದಿನದಿ ದೈಶಿಕ ದೈಹಿಕ ಸುಖದಿಂದ ಬಾಳ್ವರು
ಬಹು ದಿವಸದಲಿ ಕೀರ್ತಿಯುತರಾಗಿ||5||

ಅಂಶಿ ಅಂಶ ಅಂತರ್ಗತತ್ರಯ ಹಂಸವಾಹನ ಮುಖ್ಯ ದಿವಿಜರ ಅಸಂಶಯದಿ ತಿಳಿದು
ಅಂತರಾತ್ಮಕ ಶ್ರೀ ಜನಾರ್ಧನನ ಸಂಸ್ಮರಣೆ ಪೂರ್ವಕದಿ
ಷಡಾಧಿಕ ತ್ರಿಂಶತಿತ್ರಯ ರೂಪವರಿತು
ವಿಪಾಂಸಗನ ಪೂಜಿಸುವರು ಅವರೇ ಕೃತಾರ್ಥರು ಎನಿಸುವರು||6||

ಮೂರುವರೆ ಸಾವಿರದ ಮೇಲೆ ಅರೆ ನೂರೈದು ರೂಪದಿ ಜನಾರ್ಧನ
ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ಬಾರದಂತೆ
ಬಹುಪ್ರಕಾರ ಖರಾರಿ ಕಾಪಾಡುವನು ಸರ್ವ ಶರೀರಗಳೊಳಿದ್ದು
ಅವರವರ ಪೆಸರಿಂದ ಕರೆಸುತಲಿ||7||

ಜಯ ಜಯ ಜಯಾಕಾಂತ ದತ್ತಾತ್ರಯ ಕಪಿಲ ಮಹಿದಾಸ ಭಕ್ತಪ್ರಿಯ
ಪುರಾತನ ಪುರುಷ ಪೂರ್ಣಾನಂದ ಮಾನಘನ
ಹಯವದನ ಹರಿ ಹಂಸ ಲೋಕತ್ರಯ ವಿಲಕ್ಷಣ
ನಿಖಿಳ ಜಗದಾಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಸುವನು||8||

ಷಣ್ಣವತಿಯೆಂಬ ಅಕ್ಷರ ಈಡ್ಯನು ಷಣ್ಣವತಿ ನಾಮದಲಿ ಕರೆಸುತ
ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ಪುಣ್ಯ ಕರ್ಮವ ಸ್ವೀಕರಿಸಿ
ಕಾರುಣ್ಯ ಸಾಗರ ಸಲಹುವನು
ಬ್ರಹ್ಮಣ್ಯದೇವ ಭವಾಬ್ಧಿಪೋತ ಬಹು ಪ್ರಕಾರದಲಿ||9||

ದೇಹಗಳ ಕೊಡುವವನು ಅವರವರ ಅಹರಗಳ ಕೊಡದಿಹನೆ
ಸುಮನಸ ಮಹಿತ ಮಂಗಳ ಚರಿತ ಸದ್ಗುಣ ಭರಿತನು
ಅನವರತ ಅಹಿಕ ಪಾರತ್ರಿಕ ಸುಖಪ್ರದ ವಹಿಸಿ ಬೆನ್ನಿಲಿ ಬೆಟ್ಟವ
ಅಮೃತವ ದ್ರುಹಿಣ ಮೊದಲಾದವರಿಗೆ ಉಣಿಸಿದ ಮುರಿದ ನಹಿತರನ||10||

ದ್ರುಹಿಣ ಮೊದಲಾದ ಅಮರರಿಗೆ ಸನ್ಮಹಿತ ಮಾಯಾರಮಣ
ತಾನೇ ಸ್ವಹನೆನಿಸಿ ಸಂತೃಪ್ತಿಪಡಿಸುವ ಸರ್ವಕಾಲದಲಿ
ಪ್ರಹಿತ ಸಂಕರುಷಣನು ಪಿತೃಗಳಿಗೆ ಅಹರನೆನಿಪ ಸ್ವಧಾಖ್ಯರೂಪದಿ
ಮಹಿಜ ಫಲ ತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ||11||

ಅನ್ನನೆನಿಸುವ ನೃಪಶುಗಳಿಗೆ ಹಿರಣ್ಯ ಗರ್ಭಾಂಡದೊಳು
ಸಂತತ ತನ್ನನ ಈಪರಿಯಿಂದ ಉಪಾಸನೆಗೈವ ಭಕ್ತರನ ಬನ್ನಬಡಿಸದೆ
ಭವ ಸಮುದ್ರ ಮಹ ಉನ್ನತಿಯ ದಾಟಿಸಿ
ಚತುರ್ವಿಧ ಅನ್ನಮಯನು ಆತ್ಮ ಪ್ರದರ್ಶನ ಸುಖವನೀವ ಹರಿ||12||

ಮನವಚನ ಕಾಯಗಳ ದೆಶೆಯಿಂದ ಅನುದಿನದಿ ಬಿಡದೆ ಆಚರಿಸುತಿಪ್ಪ
ಅನುಚಿತೋಚಿತ ಕರ್ಮಗಳ ಸದ್ಭಕ್ತಿ ಪೂರ್ವಕದಿ ಅನಿಳ ದೇವನೊಳಿಪ್ಪ
ನಾರಾಯಣಗೆ ಇದು ಅನ್ನವೆಂದು ಕೃಷ್ಣಾರ್ಪಣವೆನುತ ಕೊಡು
ಸ್ವೀಕರಿಸಿ ಸಂತೈಪ ಕರುಣಾಳು||13||

ಏಳು ವಿಧ ಅನ್ನ ಪ್ರಕರಣವ ಕೇಳಿ ಕೋವಿದರ ಆಸ್ಯದಿಂದಲಿ
ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ
ಕಾಲಕಾಲದಿ ನೆನೆದು ಪೂಜಿಸು ಸ್ಥೂಲ ಮತಿಗಳಿಗೆ ಇದನು ಪೇಳದೆ
ಶ್ರೀ ಲಕುಮಿ ವಲ್ಲಭನೆ ಅನ್ನಾದನ್ನಾದನು||14||

ಎಂದರಿದು ಸಪ್ತಾನ್ನಗಳ ದೈನಂದಿನದಿ ಮರೆಯದೆ
ಸದಾ ಗೋವಿಂದಗೆ ಅರ್ಪಿಸು ನಿರ್ಭಯದಿ ಮಹಾಯಜ್ಞವು ಇದೆಂದು
ಇಂದಿರೇಶನು ಸ್ವೀಕರಿಸಿ ದಯದಿಂದ ಬೇಡಿಸಿಕೊಳದೆ
ತವಕದಿ ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ||15||

ಸೂಜಿ ಕರದಲಿ ಪಿಡಿದು ಸಮರವ ನಾ ಜಯಿಸುವೆನು ಎಂಬ ನರನಂತೆ
ಈ ಜಗತ್ತಿನೊಳು ಉಳ್ಳ ಅಜ್ಞಾನಿಗಳು ನಿತ್ಯದಲಿ
ಶ್ರೀ ಜಗತ್ಪತಿ ಚರಣ ಯುಗಳ ಸರೋಜ ಭಕ್ತಿ ಜ್ಞಾನ ಪೂರ್ವಕ ಪೂಜಿಸದೆ
ಧರ್ಮಾರ್ಥ ಕಾಮವ ಬಯಸಿ ಬಳಲುವರು||16||

ಶಕಟ ಭಂಜನ ಸಕಲ ಜೀವರ ನಿಕಟಗನು ತಾನಾಗಿ
ಲೋಕಕೆ ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ
ಅಕುಟಿಲಾತ್ಮಕ ಭಕುತ ಜನರಿಗೆ ಸುಖದನೆನಿಸುವ ಸರ್ವಕಾಲದಿ
ಅಕಟಕಟ ಈತನ ಮಹಾ ಮಹಿಮೆಗಳಿಗೆ ಏನೆಂಬೆ||17||

ಶ್ರೀ ಲಕುಮಿವಲ್ಲಭನು ವೈಕುಂಠ ಆಲಯದಿ ಪ್ರಣವ ಪ್ರಕೃತಿ
ಕೀಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು
ಮೂಲ ಕಾರಣಾoಶಿ ನಾಮದಿ ಲೀಲೆಗೈಸುತ ತೋರಿ ಕೊಳ್ಳದೆ
ಪಾಲಿನೊಳು ಘೃತವಿದ್ದ ತೆರದಂತೆ ಇಪ್ಪ ತ್ರಿಸ್ಥಳದಿ||18||

ಮೂರು ಯುಗದಲಿ ಮೂಲ ರೂಪನು ಸೂರಿಗಳ ಸಂತೈಸಿ
ದಿತಿಜ ಕುಮಾರಕರ ಸಂಹರಿಸಿ ಧರ್ಮವನು ಉಳುಹಬೇಕೆಂದು
ಕಾರುಣಿಕ ಭೂಮಿಯೊಳು ನಿಜ ಪರಿವಾರ ಸಹಿತ ಅವತರಿಸಿ
ಬಹು ವಿಧ ತೋರಿದನು ನರವತ್ ಪ್ರವೃತ್ತಿಯ ಸಕಲ ಚೇತನಕೆ||19||

ಕಾರಣಾಹ್ವಯ ಪ್ರಕೃತಿಯೊಳಗಿದ್ದು ಆರಧಿಕ ಹದಿನೆಂಟು ತತ್ತ್ವವ
ತಾ ರಚಿಸಿ ತದ್ರೂಪ ತನ್ನಾಮಗಳನೆ ಧರಿಸಿ
ನೀರಜ ಭವಾಂಡವನು ನಿರ್ಮಿಸಿ ಕಾರುಣಿಕ ಕಾರ್ಯಾಖ್ಯ ರೂಪದಿ ತೋರುವನು
ಸಹಜಾಹಿತಾಚಲಗಳಲಿ ಪ್ರತಿದಿನದಿ||20||

ಜೀವರಂತರ್ಯಾಮಿ ಅಂಶಿ ಕಳೇವರಗಳೊಳಗೆ ಇಂದ್ರಿಯಗಳಲಿ
ತಾ ವಿಹಾರವ ಗೈಯುತ ಅನುದಿನ ಅಂಶ ನಾಮದಲಿ
ಈ ವಿಷಯಗಳನುಂಡು ಸುಖಮಯವೀವ ಸುಖ ಸಂಸಾರ ದುಃಖವ
ದೇವ ಮಾನವ ದಾನವರಿಗೆ ಅವಿರತ ಸುಧಾಮ ಸಖ||21||

ದೇಶ ದೇಶವ ಸುತ್ತಿ ದೇಹಾಯಾಸಗೊಳಿಸದೆ ಕಾಮ್ಯ ಕರ್ಮ ದುರಾಶೆಗೊಳಗಾಗದಲೆ
ಬ್ರಹ್ಮಾದಿ ಅಖಿಳ ಚೇತನರು
ಭೂ ಸಲಿಲ ಪಾವಕ ಸಮೀರ ಆಕಾಶ ಮೊದಲಾದ ಅಖಿಳ ತತ್ತ್ವ
ಪರೇಶಗೆ ಇವು ಅಧಿಷ್ಠಾನವು ಎಂದರಿತು ಅರ್ಚಿಸು ಅನವರತ||22||

ಎರಡು ವಿಧದಲಿ ಲೋಕದೊಳು ಜೀವರುಗಳು ಇಪ್ಪರು ಸಂತತ
ಕ್ಷರಾಕ್ಷರ ವಿಲಿಂಗ ಸಲಿಂಗ ಸೃಜ್ಯ ಅಸೃಜ್ಯ ಭೇದದಲಿ ಕರೆಸುವದು
ಜಡ ಪ್ರಕೃತಿ ಪ್ರಣವಾಕ್ಷರ ಮಹದಣು ಕಾಲ ನಾಮದಿ
ಹರಿ ಸಹಿತ ಭೇದಗಳ ಪಂಚಕ ಸ್ಮರಿಸು ಸರ್ವತ್ರ||23||

ಜೀವ ಜೀವರ ಭೇದ ಜಡ ಜಡ ಜೀವ ಜಡಗಳ ಭೇದ
ಪರಮನು ಜೀವ ಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ
ಈ ವಿರಿಂಚಿ ಅಂಡದೊಳು ಎಲ್ಲ ಟಾವಿನಲಿ ತಿಳಿದೈದು ಭೇದ
ಕಳೇವರದೊಳರಿತು ಅಚ್ಯುತನ ಪದವೈದು ಶೀಘ್ರದಲಿ||24||

ಆದಿಯಲ್ಲಿ ಕ್ಷರಾಕ್ಷರಾಖ್ಯ ದ್ವೇಧ ಅಕ್ಷರದೊಳು ರಮಾ ಮಧುಸೂದನರು
ಕ್ಷರಗಳೊಳು ಪ್ರಕೃತಿ ಪ್ರಣವ ಕಾಲಗಳು ವೇದ ಮುಖ್ಯ ತೃಣಾoತ ಜೀವರ
ಭೇದಗಳನರಿತು ಈ ರಹಸ್ಯವ ಭೋದಿಸದೇ ಮಂದರಿಗೆ
ಸರ್ವತ್ರದಲಿ ಚಿಂತಿಪುದು||25||

ದೀಪದಿಂ ದೀಪಗಳು ಪೊರಮಟ್ಟು ಆಪಣ ಆಲಯಗಳ ತಿಮಿರಗಳ ತಾ ಪರಿಹರಗೈಸಿ
ತದ್ಗತ ಪದಾರ್ಥ ತೋರ್ಪಂತೆ
ಸೌಪರಣಿ ವರವಹನು ತಾ ಬಹು ರೂಪ ನಾಮದಿ ಎಲ್ಲ ಕಡೆಯಲಿ ವ್ಯಾಪಿಸಿದ್ದು
ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ||26||

ನಳಿನ ಮಿತ್ರಗೆ ಇಂದ್ರಧನು ಪ್ರತಿ ಫಲಿಸುವಂತೆ
ಜಗತ್ರಯವು ಕಂಗೊಳಿಪುದು ಅಣು ಉಪಾಧಿಯಲಿ ಪ್ರತಿಬಿಂಬ ಅಹ್ವಯದಿ ಹರಿಗೆ
ತಿಳಿಯೆ ತ್ರಿಕಕುದ್ಧಾಮನ ಅತಿ ಮಂಗಳ ಸುರೂಪವ
ಸರ್ವ ಟಾವಿಲಿ ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು||27||

ರಸ ವಿಶೇಷದೊಳು ಅತಿ ವಿಮಲಾ ಸಿತವಸನ ತೋಯಿಸಿ ಅಗ್ನಿಯೊಳಗಿಡೆ
ಪಸರಿಸುವುದು ಪ್ರಕಾಶ ನಸಗುಂದದಲೆ ಸರ್ವತ್ರ
ತ್ರಿಶಿರ ದೂಷಣ ವೈರಿ ಭಕ್ತಿ ಸುರಸದಿ ತೋಯ್ದ ಮಹಾತ್ಮರನು
ಬಾಧಿಸವು ಭವದೊಳಗೆ ಇದ್ದರೆಯು ಸರಿ ದುರಿತ ರಾಶಿಗಳು||28||

ವಾರಿನಿಧಿಯೊಳಗುಳ್ಳ ಅಖಿಳ ನದಿಗಳು ಬೇರೆ ಬೇರೆ ನಿರಂತರದಿ ವಿಹಾರಗೈಯುತ
ಪರಮ ಮೋದದಲಿಪ್ಪ ತೆರದಂತೆ
ಮೂರು ಗುಣಗಳ ಮಾನಿನಿಯೆನಿಸುವ ಶ್ರೀ ರಮಾ ರೂಪಗಳು ಹರಿಯಲಿ ತೋರಿತಿಪ್ಪವು
ಸರ್ವ ಕಾಲದಿ ಸಮರಹಿತವೆನಿಸಿ||29||

ಕೋಕನದ ಸಖನ ಉದಯ ಘೋಕಾಲೋಕನಕೆ ಸೊಗಸದಿರೆ
ಭಾಸ್ಕರ ತಾ ಕಳಂಕನೆ? ಈ ಕೃತೀಪತಿ ಜಗನ್ನಾಥನಿರೆ
ಸ್ವೀಕರಿಸಿ ಸುಖಪಡಲು ಅರಿಯದ ಅವಿವೇಕಿಗಳು ನಿಂದಿಸಿದರೆ ಏನಹುದು
ಈ ಕವಿತ್ವವ ಕೇಳಿ ಸುಖಪಡದಿಹರೆ ಕೋವಿದರು||30||

ಚೇತನಾಚೇತನಗಳಲಿ ಗುರು ಮಾತರಿಶ್ವಾಂತರ್ಗತ ಜಗನ್ನಾಥ ವಿಠಲ
ನಿರಂತರದಿ ವ್ಯಾಪಿಸಿ ತಿಳಿಸಿ ಕೊಳ್ಳದಲೇ
ಕಾತರವ ಪುಟ್ಟಿಸಿ ವಿಷಯದಲಿ ಧಾನರ ಮೋಹಿಸುವ
ನಿರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ||31||

Pitrugana Sandhi Audio

Pitrugana Sandhi Audio

Click to buy Full Harikathamrutasara Kannada Ebook (all 32 sandhi)

You can look at Pitrugana Sandhi in English

You can look at Vighneshwara Stotra Sandhi in English/Kannada

2 thoughts on “Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ”

Leave a Comment

Your email address will not be published. Required fields are marked *