Table of Contents
ಶ್ರಾವಣ ಶನಿವಾರ ಹಾಡಿನ ಬಗ್ಗೆ (About Shravana Shanivara Haadu)
ಶ್ರಾವಣ ಶನಿವಾರದ ಹಾಡನ್ನು ಸಂಪತ್ತು ಶನಿವಾರ ಹಾಡು ಎಂತಲೂ ಕರೆಯುತ್ತೇವೆ.
ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ. ಶ್ರಾವಣ ಶುಕ್ರವಾರದ ಹಾಡನ್ನು ಸಹ ರಚಿಸಿದ್ದಾರೆ
ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ.
ಶ್ರಾವಣ ಶನಿವಾರ ಹಾಡು ಲಿರಿಕ್ಸ್ ( Shravana Shanivara Haadu Lyrics In Kannada)
ಗಜವದನನ ಪಾದಾಂಬುಜಗಳಿಗೆರಗುವೆ |
ಅಜನರಸಿಗೆ ನಮಸ್ಕರಿಸಿ |
ತ್ರಿಜಗವಂದಿತ ಲಕ್ಷ್ಮೀನಾರಾಯಣಸ್ವಾಮಿಯ |
ನಿಜ ಪತ್ನಿ ಕಥೆಯ ವರ್ಣಿಸುವೆ || 1 ||
ಅರಸನ ಸೇವೆ ಮಾಡುತೊಂದು ಪಟ್ಟಣದೊಳು
ಇರುತಿದ್ದ ಸೋಮೇಶ ಭಟ್ಟ |
ಹರುಷದಿಂದಲಿ ಸೊಸೆಯರು ಗಂಡುಮಕ್ಕಳು
ಭರಿತರಾದರು ಸುಖದಿಂದ || 2 ||
ಆ ಮಹಾ ಕ್ಷೀರ ಸಾಗರದಲ್ಲಿ ಜನಿಸಿದ |
ಶ್ರೀಮಹಾಲಕ್ಷ್ಮೀದೇವಿಯನು |
ನೇಮ ದಿಂದಿಂದಿಟ್ಟು ನಿಷ್ಟೇಯಲಿ ಸೋಮೇಶನು |
ತಾ ಮಹಾ ಸಂಭ್ರಮ- ದಿಂದ || 3 ||
ಚಾರು ಪರಿಮಳ ಅರಿಶಿಣ ಗಂಧ ಕುಂಕುಮ |
ಕೇದಿಗೆ ಕುಸುಮ ಮಲ್ಲಿಗೆಯ |
ಮಾಧವನರಸಿ ಮಹಾಲಕ್ಷ್ಮೀಗರ್ಪಿಸಿ |
ಮಂಗಳಾರತಿ ಬೆಳಗಿದರು || 4 ||
ಹೋಳಿಗೆಣ್ಣೋರಿಗೆ ಭಕ್ಷ, ಸಣ್ಣ ಶಾವಿಗೆ ಪರಮಾನ್ನ |
ಶಾಲ್ಯನ್ನ ಶಾಕಂಗಳು |
ಚೆನ್ನವಾಗಿದ್ದ ತಾಂಬೂಲ ವನ್ನರ್ಪಿಸಿ |
ಆದರದಿಂದುಂಡರತಿ ಹರುಷದಲಿ || 5 ||
ಸುಂದರ ಗೌರಿ ಶುಕ್ರವಾರ ಪೂಜಿಸಿ |
ಆನಂದದಿ ಶನಿವಾರದಲ್ಲಿ |
ಕುಂದ ಮಂದಾರ ಮಲ್ಲಿಗೆ
ಗಂಧ ಕುಂಕುಮ ಚೆಂದದಿಂದಾರತಿ ಬೆಳಗಿದರು || 6 ||
ಹಿಟ್ಟಿನ ಕಡುಬು ಹಿಂಡಿ ಪಲ್ಯವನೆ ಮಾಡಿ |
ಅಚ್ಚೆಳ್ಳು ಗಾಣದೆಣ್ಣೆಯನು |
ನುಚ್ಚು ಮಜ್ಜಿಗೆ ಹುಳಿ ತಿಳಿಯ ಕಟ್ಟಂಬಲಿ |
ಇಟ್ಟಾರು ನೈವೇದ್ಯವನು || 7 ||
ಭೋಜನಕೆನುತ ಕುಳ್ಳಿರುವೋ ಕಾಲಕ್ಕೆ |
ಬಂದು ರಾಜನ ಸತಿಯು ಕುಳ್ಳಿರಲು |
ಸೂಜಿಗವೇ ನಿಮ್ಮ ಗೌರಿಯ ಸಂಪತ್ತು
ಮೂರ್ಜಗ ದೋಳು ಕಾಣೆನೆಂದು || 8 ||
ಬೇಕಾದರೊಂದು ಬೇಡಲರಸನ ಸತಿ |
ಸಾಕು ದರಿದ್ರ ದಂಬಲಿಯು |
ಹಾಕಿದರ್ ಹರಡಿ ಕಂಕಣದೋಳು ಸಿಕ್ಕೀತು |
ನಾ ಕೈಯ ಇಡಲಾರೆನೆಂದು || 9 ||
ಥಟ್ಟನೆದ್ಹಾಕಿ ಕೊಂಡಷ್ಟು ಪದಾರ್ಥವ
ಸಂತುಷ್ಟ- ರಾಗುಂಡ ರವರು |
ಕಟ್ಟಿದ್ದ ತೂಗುಮಣಿಯಲಿ ಕಾಲುಗಳಿಳಿಬಿಟ್ಟು
ಕೂತಳು ರಾಜನರಸಿ || 10 ||
ಒಂದೊಂದು ಅಡಿಗೆ ನಿಂದ್ಯವ ಮಾಡಿ
ನಗುತಿರೆ ಕುಂದಿತು ಸಕಲ ಸಂಪತ್ತು |
ಬಂದಿತು ಪರ ರಾಜರಿಂದ ಮುತ್ತಿಗೆ
ದಾರಿ ಬಂಧನ ಮಾಡ ಬೇಕೆನುತ || 11 ||
ಅರಿತು ಓಡುತಲಿರೆ ತ್ವರಿತ ಬಂದರಿತನ
ಅನುಸರಿಸ್ಯಾಗ ನಡೆದಳು |
ದಿನತುಂಬಿದಂತೆ ಗರ್ಭಿಣಿಗಾಗ
ಬಂದಾವು ಕ್ಷಣ ಕೊಮ್ಮೆ ಟೊಂಕ ಬೇನೆಗಳು || 12 ||
ಪುತ್ಥಳಿ ಗೊಂಬೆಯಂದದಿ ಜೋಡು
ಮಕ್ಕಳು ಕಿತ್ತಳೆ ವನದಲ್ಲಿ ಜನಿಸೆ |
ಹೊಚ್ಚಿಟ್ಟಳಾ ಬಾಳೆ ಎಲೆ ಹಾಕಿ
ಮಲಗಿಸಿ ಥಟ್ಟನೆ ದಾಟಿ ನಡೆದಳು || 13 ||
ಬೇಕಾದ ಫಲಗಳನೇಕ ಪುಷ್ಪಂಗಳ
ಜೋಕೆ ಮಾಡುತಾ ವನದೋಳು |
ಕೋಗಿಲೆ ಗಿಳಿ ನವಿಲ್ ಹಿಂಡುಗಳನೆ
ಕಂಡು ಹಾಕುತಿದ್ದವು ಕಾಲಗಳನು || 14 ||
ನಸುಕಿನೊಳಗೆ ಬಂದ ಸೋಮೇಶ ಭಟ್ಟನು |
ಹಸು ಮಕ್ಕಳನ್ನೇ ಕಾಣುತಲಿ|
ಮುಸುಕಿಟ್ಟು ತಂದು ಮುದ್ದಿಸುತ
ತನ್ನಯ ಸತಿ ವಶ ಮಾಡಿಕೊಟ್ಟ ಕೈಯ್ಯೊಳಗ || 15 ||
ಹುಟ್ಟಲಿಲ್ಲವೋ ಹೆಣ್ಣು ಮಕ್ಕಳು ನಮಗಿನ್ನು |
ಕೊಟ್ಟಾನು ದೇವನೆಂದೆನುತಾ |
ಅರ್ತಿ ಯಿಂದಲಿ ಮೂಬಟ್ಟಾ- ಲೀರಲು ಮಾಡಿ |
ತೊಟ್ಟಿಲೋಳಿಟ್ಟು ತೂಗಿದರು || 16 ||
ನಾಮಕರಣವ ಮಾಡುತ ಹೆಸರಿಟ್ಟರು |
ಸಾಯಕ್ಕ ಧೇಯಕ್ಕ ಎಂದೆನುತ |
ಪ್ರಾಯಕ್ಕೆ ಬಂದ ಮಕ್ಕಳ ನೋಡಿ
ಹುಡುಕಿದ ಸೋಮಾರ್ಕರಂಥಾ ವರರನು || 17 ||
ಅರಸನ ಕರೆತಂದು ಅಕ್ಕನ ಕೊಟ್ಟರಾಗಲೇ
ಕರೆಸಿ ಪ್ರಧಾನಿಗೆ ತಂಗಿಯನು |
ಹರುಷದಿಂದಲಿ ಧಾರೆ ಎರೆದು
ಹೆಣ್ಮಕ್ಕಳ ಕಳಿಸಿದನವರ ಮಂದಿರಕೆ || 18 ||
ಅಕ್ಕರೆಯಿಂದ ಹೇಳಿದಳು ಸೋಮೇಶಮ್ಮ |
ಮಕ್ಕಳ ಕರೆದು ಬುದ್ಧಿಯನು |
ಶುಕ್ರವಾರದಗೌರಿ ಮರೆಯದೇ
ಮಾಡೇ ಶ್ರೀಲಕ್ಷ್ಮೀ ಒಲಿವಳೆಂದೆನುತ || 19 ||
ಸಾಯಕ್ಕ ಮಾಡಲಾ ಸಂತಾನ ಸಂಪತ್ತಿಗೆ |
ಸಹಾಯವಾದಳು ಮಹಾಲಕ್ಷ್ಮೀ |
ಧೇಯಕ್ಕ ಮರೆತು ದೇಹಕ್ಕೆ ಗ್ರಾಸವಿಲ್ಲದೆ
ರಾಯನ ಸೆರೆಹಾಕಿದರು || 20 ||
ಪೊಡವಿ ಪಾಲಕ ಬಂದ್ಹಿಡಿದು ಕೊಂಡೊಯ್ಯಲು |
ಉಡುಗೆ ತೊಡುಗೆ ವಸ್ತ್ರಾಭರಣ |
ಅಡಗಿತು ಸಕಲ ಸಂಪತ್ತು
ಧೇಯಕ್ಕಗೆ ಧೃಢವಾಯಿತಾಗ ದಾರಿದ್ರ್ಯ || 21 ||
ಮಾತನಾಡಿದರು ಮಕ್ಕಳು ತಾಯರೊಡಗೂಡಿ |
ಈ ತೆರವಾಯಿತೇ ಬದುಕು |
ಮಾತಾಪಿತೃರು ಒಡ ಹುಟ್ಟಿ- ದವರು
ನಿನಗೆ ಮಾತನಾಡಿಸುವವರು ಯಾರಿಲ್ಲೇ || 22 ||
ದೂರದಲ್ಲಿರುವೋರೆನ್ನ ತಾಯ್ತಂದೆಯರು |
ಸಾರ್ಯಾದಲ್ಲಿರುವೋಳೊಬ್ಬ ತಂಗಿ |
ಸೂರೆ ಹೋಯಿತು ದೊರೆತನ ಭಾಗ್ಯ |
ಬಡ ಪ್ರಧಾನಿ ಹೇಗಿರುವನೋ ನಾ ಕಾಣೆ || 23 ||
ಕಂಡು ಬರುವೆನೆಂದು ಚಿಂದಿ ಮೈಗೆ ಸುತ್ತಿ
ತುಂಡು ಕೋರಿಯ ಹೊದ್ದುಕೊಂಡು |
ಮಂಡೆಗ್ಹಚ್ಚಿದ ತಾಳಾ ಪ್ರಣತಿ ಎಣ್ಣೆ ಹೊಳೆ |
ದಂಡೀಲಿ ಬಂದು ಕುಳಿತನು || 24 ||
ಪೋರ ನೀನ್ಯಾರೆಂದ್ವಿಚಾರ ಮಾಡಲು |
ನೀರಿಗೆ ಬಂದ ನಾರಿಯರು |
ದೂರದಿಂದ ಬಂದೆ ಧೇಯಕ್ಕನ
ಹಿರಿಯ ಕುಮಾರನೆಂದ್ಹೇಳಿ ಕಳುಹಿದನು || 25 ||
ಬಂದ್ಹೇಳಿ- ದವನ ಅಂದ ಚಂದಗಳೆಲ್ಲ |
ಕರೆತನ್ನಿ ಹಿತ್ತಲ ಬಾಗಿಲಿನಿಂದ |
ಬಂದ್ಹೇಳಿಕೊಂಡ ದಾರಿದ್ರ್ಯ
ಕಷ್ಟ ಗಳೆಲ್ಲ ಉಂಡುಟ್ಟು ಸುಖದಿ ತಾನಿದ್ದ || 26 ||
ಆಲಯಕ್ಹೋಗಿ ಬರುವೆನೆಂದಪ್ಪಣೆ
ಕೇಳಿ ಕಾಲಹರಣ ಮಾಡದಂತೆ |
ಕೋಲಿನೊಳಗೆ ಹಣ ತುಂಬಿ ಕೈಯಲಿ ಕೊಟ್ಟು |
ಆಲಸ್ಯವಿಲ್ಲದೇ ಕಳುಹಿದಳು || 27 ||
ಬಾಲಕ ನಿನಗಿಂಥ ಕೋಲೇಕೆನುತಲಿ
ಗೋಪಾಲಕ ಸೆಳೆದು ಕೊಂಡೊಯ್ಯೇ |
ನೂತನದವರಿಗೆ ಇಂಥ ವಸ್ತು ಯಾಕೆಂದು |
ಅಲೋಚಿಸುತ ತಾ ಬಂದ || 28 ||
ಮಿಡುಕುತ್ತ ಬಂದು ಮಾತೆಗೆರಗಿದನಾಗ
ಒಡನುಡಿ ವಾರ್ತೆ ಕೇಳುತಲಿ |
ಕೊಡುವಷ್ಟು ಕೊಟ್ಟಾರು ನಮಗೆ ದಕ್ಕದೆನುತಲಿ |
ನಡೆದನು ಮತ್ತೋಬ್ಬ ತನಯ || 29 ||
ತಾಳಾ ಪ್ರಣತಿ ಎಣ್ಣೆ ತಲೆಗೆ ಪೂಸಿ
ಮೊಳ ಕೋರಿಯನ್ನೆ ಹೊದ್ದುಕೊಂಡು |
ಬಳಕುತ್ತ ಬಂದು ಭಾವಿಯ ಮೇಲೆ
ಕುಳಿತ್ಹೇಳಿ ಕಳುಹಿದನವರ ಮಂದಿರಕೆ || 30 ||
ಗೊತ್ತಿಲಿ ಕರೆತಂದು ಹಿತ್ತಲ
ಬಾಗಿಲಲ್ಲೇ ವಾರ್ತೇಗಳನೆ ಕೇಳುತ |
ಅತ್ಯಂತ ಕರುಣ ದಿಂದಲೇ ಭಕ್ಷ್ಯ ಪಾಯಸ |
ಮೃಷ್ಟಾನ್ನವನ್ನುಣಿಸಿದರು || 31 ||
ನಿತ್ಯುಪವಾಸ ಮಾಡುವರೆನ್ನ
ಮನೆಯಲ್ಲಿ ಅಪ್ಪಣೆಗಳ ನೀಡೆಂದೆನುತ |
ಬುತ್ತಿಯೊಳಗೆ ಹಣ ಕಟ್ಟಿ ಕಳುಹಲು
ಕಾಗೆ ಕಚ್ಚಿ ಕೊಂಡೊಯ್ಯಲಾಕ್ಷಣದಿ || 32 ||
ಏನು ಹೇಳಲಿ ನಾ ಹೋದ ಕಾರ್ಯ
ಹೀನವಾಯಿತು ಹೀಗೆಂದೆನುತ |
ನಾ ಹೋಗಿ ಬರುವೆನೆಂದೆನುತ
ಮತ್ತೋಬ್ಬ ಕುಮಾರ ತಾ ತೆರಳಿದನು || 33 ||
ಹರಕು ಕೋರಿಯನುಟ್ಟು ಒಡಕು ತಂಬಿಗೆ
ಪಿಡಿದು ಕೆರಕು ಬುತ್ತಿಯಯನೇ ಕಟ್ಟಿಕೊಂಡು |
ಗುರುತ್ಹೇಳಿ ಕಳುಹೆ ಹಿತ್ತಿಲ ಬಾಗಿಲಿನಿಂದ
ಕರೆತಂದರಾಗ ಮಂದಿರಕೆ || 34 ||
ಎರಡು ದಿನವಿಟ್ಟುಕೊಂಡು- ಪಚರಿಸುತ್ತ |
ಬುರುಡೆಯೊಳಗೆ ಹಣವನ್ನು |
ಕಡುಬೇಗದಿಂದ ಕೈಯ್ಯಲಿ ಕೊಡಲಾಗ |
ನಡೆದೆತಾನಡವಿಮಾರ್ಗದಲಿ || 35 ||
ಸೆಳೆದು ನಾಲಿಗೆ ಬಿಸಿಲೇರಿ ಭಾವಿಯ ಕಂಡು |
ಇಳಿದ ಪಾವಟಿಗೆಯಲ್ಲಿಟ್ಟು |
ಬುಡು ಬುಡು ಉರುಳಿ ಮಡುವ ಸೇರಲದ
ಕಂಡು ಮಿಡುಕುತ್ತ ಬಂದ ಮಂದಿರಕೆ || 36 ||
ಗತಿ ಹೀನರೊಳಗೆ ನಮ್ಮಂಥ ನಿರ್ಭಾಗ್ಯರು
ಪೃಥ್ವಿಯೊಳಗೆ ಕಾಣೆನೆಂದೆನುತಾ |
ಅತಿ ಬಾಯಿ ಬಿಡುವ ಮಾತೆಯ ಕಂಡು
ಮತ್ತೊಬ್ಬ ಸುತನಾಗ ತಾ ತೆರಳಿದನು || 37 ||
ಸೊಕ್ಕಿದ ಮೈಗೆ ಛಿದ್ರೆ ಬಟ್ಟೆಯ ಸುತ್ತಿ |
ಕುಕ್ಕುತ ಶೀರು ಹೇನುಗಳು |
ಚಿಕ್ಕಮ್ಮಗೆ ಪೇಳಿ ಕಳುಹಲು|
ಕರೆತಂದ್ರು ಹಿತ್ತಿಲ ಬಾಗಿಲಿನಿಂದಾ || 38 ||
ಎಳೆಂಟು ದಿನದಲ್ಲಿ ಬಹಳುಪಚರಿ- ಸುತ್ತ |
ಬಾಳುವ ಕ್ರಮ ಕೇಳುತಲಿ |
ಜಾಳಿಗಿ ಹೊನ್ನು ಚಮ್ಮಾಳಿಗೆಯಲಿ ತುಂಬಿ |
ಕಾಲ ಮೆಟ್ಟಿಸಿ ಕಳುಹಿದಳು || 39 ||
ಅದು ಮೆಟ್ಟಿ ಬರುತಿರೆ ಒದಗಿ ಬಂದಾಂಶದಿ
ಹುದಲು ಕಾಣದೆ ಸಿಗಿಬಿದ್ದು |
ಎದೆ ಬಾಯಿ ಬಿಡುತೆತ್ತ ಹುಡುಕಿದರಿಲ್ಲೆಂದು |
ಎದುರಿಗೆ ಬಂದು ತಾ ನಿಂತಾ || 40 ||
ನಾಲ್ಕು ಮಂದಿಯ ಸುದ್ದಿ ನಾನಾ ಪರಿಯಲಿ ಕೇಳಿ |
ವ್ಯಾಕುಲವಾಯಿತು ಮನಕೆ |
ನಾ ಕಂಡು ಬರುವೆನೆಂದೆನುತ ಧೇಯಕ್ಕ |
ಆ ಕಾಲದಲ್ಲಿ ತೆರಳಿದಳು || 41 ||
ಉಟ್ಟಳು ಮಾರು ಸೀರೆಯನ್ನು ತೋಳಿನಲಿ |
ತೊಟ್ಟಾಳು ಚಿಂದಿ ಕುಪ್ಪಸವ |
ಕಟ್ಟಿದ ಜಡೆಗೆಣ್ಣೆ ಹಚ್ಚಿ ಗಂಟನೆ ಹಾಕಿ |
ಬೊಟ್ಟು ಕುಂಕುಮ ತೀಡಿದಳು || 42 ||
ಒಂದೊಂದು ಗಾಜಿನ ಬಳೆ ಕೈಯಲ್ಲಿ |
ಕಂದಿ ಕುಂದಿದ ಕೂಸನ್ನೆತ್ತಿ ಬಂದಾಳು
ನಿಮ್ಮ ಧೇಯಕ್ಕನೆಂದೆನುತಲಿ
ತಂಗಿಗೇ ವಾರ್ತೆಯ ಕಳುಹಿದಳು || 43 ||
ಅಕ್ಕನ ಕರೆತಂದರಾ ಹಿತ್ತಿಲಿಂದಲಿ
ಶುಕ್ರವಾರದ ಶುಭ ದಿನದಿ |
ಮಕ್ಕಳು ಸೊಸೆಯ ರೊಡಗೂಡಿ ಬಂದು
ಧೇಯಕ್ಕನ ಚರಣಕ್ಕೆರಗಿದರು || 44 ||
ಅಂದಗಲಿದ ಅಕ್ಕ ತಂಗಿಯರಿಬ್ಬರು
ಇಂದಿಗೆ ಕಲೆತೆವೆಂದೆನುತಾ ಮಿಂದು
ಮಡಿಯನುಟ್ಟು ಬಂದೆಲ್ಲಾ ಪರಿವಾರ
ಬಂದು ಭೋಜನಕೆ ಕುಳಿತರು || 45 ||
ಹೋಳಿಗೆ ಹೊಸ ಬೆಣ್ಣೆ ಕಾಸಿದಾ ತುಪ್ಪವು |
ಕ್ಷೀರ ಶಾವಿಗೆಯ ಮೃಷ್ಟಾನ್ನ |
ಬೇಗದಿಂದುಂಡು ಹಾಕುತಲೆ ತಾಂಬೂಲ
ತೂಗು ಮಂಚದಿ ಮಲಗಿದರು || 46 ||
ಬೆಳಗಾಗಲೆದ್ದು ಹೇಳಿದರೆ ಆ ಸೊಸೆಯರ ಕರೆದು
ಸಾಯಕ್ಕ ಕೆಲಸವ |
ಬಿಳಿಜೋಳ ಕುಟ್ಟಿ ಬೀಸಿರೆ ನೀವು
ಇಂದಿನ ಅಡುಗೆಯ ಕ್ರಮ ಹೇಳುವೆನು || 47 ||
ಹುಳಿನುಚ್ಚು ಮಾಡೀರೆ ತಿಳಿಯ ಕಟ್ಟಂಬಲಿ |
ಎಳೆಸೊಪ್ಪು ಹಿಂಡಿಪಲ್ಯವನು |
ತರಿಸುವೆ ಗಾಣದ ಎಳ್ಳಿನ ತಿಳಿ ಎಣ್ಣೆ |
ಹಿಟ್ಟೀನ ಕಡಬು ನೀವ್ ಎನುತ || 48 ||
ಅದ ಕೇಳಿ ಧೇಯಕ್ಕ ಹೃದಯ ತಲ್ಲಣಿಸುತ್ತ
ಎದೆಯೊಳಗಲಗು ನಟ್ಟಂತೆ |
ಉರಿಯ ಒಳಗೆ ಎಣ್ಣೆ ಸುರುವಿದಂತಾಯಿತು
ಸಿರಿಯು ಸಂಪತ್ತಿನಿಂದಾಕೆಗೆ || 49 ||
ಗರಗಸದಿಂದಲಿ ಕೊರೆದುಪ್ಪು ಸಾಸಿವೆ
ಅರೆದ್ಹಚ್ಚಿದಂಥ ಮಾತುಗಳು |
ಹುಟ್ಟ ಬಡವರು ಬರಬಾರದು
ಜಗದೋಳು ಅಟ್ಟುಂಬೋ ಮನೆಯ ಬಾಗಿಲಿಗೆ || 50 ||
ಕಷ್ಟದಿ ಕಾಲ ಕಳೆಯಲಾಗದಿದ್ದರೆ
ಅಟ್ಟಡವಿ ಸೇರೋದೇ ಲೇಸು |
ಪರರ ಮನೆಯಲಿ ಅಪಹಾಸ್ಯವಾಗುವದಕ್ಕಿಂತಾ
ವನವಾಸಗಳು ಲೇಸೆಂದೆನುತಾ || 51 ||
ಮನದ ಸಂತಾಪ ಸೈರಿಸಲಾರದೆದ್ದಳು ದನವನ್ನೇ ಕಟ್ಟೋ ಮಂದಿರಕೆ |
ಎತ್ತಿನ ಗೋದಾನಿ ಒಳಗೆ ಕಂದಲ ದಂಟು ಸಿಪ್ಪೆಗಳನೆ ಹೊದ್ದುಕೊಂಡು |
ಕಚ್ಚುತ್ತಿರಲು ಚಿಕ್ಕಾಡು ಕ್ರಿಮಿಗಳೆಲ್ಲಾ |
ಅತ್ತಿತ್ತಲುಗದೇ ಮಲಗಿದಳು || 52 ||
ಮಧ್ಯಾಹ್ನವಾಯಿತು ಅಡಿಗೆ ಧೇಯಕ್ಕನ
ಸದ್ದು ಸುಳಿವು ಕಾಣಲಿಲ್ಲ |
ನಿದ್ರೆಯಿಂದೆಲ್ಲೋ ಮಲಗಿದ್ದಾಳಾಕೆಯು |
ಇದ್ದಲ್ಲಿಂದ ಕರೆತನ್ನಿರವಳ || 53 ||
ಬಲ್ಲಷ್ಟು ಮನೆ ಹುಡುಕಿದೆವು ಅತ್ತೆಬಾಯಾರ |
ಸೊಲ್ಲು ಸುಳಿವು ಕಾಣಲಿಲ್ಲಾ |
ಎಲ್ಲಿ ಹುಡುಕಿದರಿಲ್ಲವೆನುತ ಬಂದಾಗ
ಎಲ್ಲ ಸೊಸೆಯರು ಹೇಳಿದರು || 54 ||
ಒಳಗೆಲ್ಲ ಹುಡುಕಿ ಬಂದೇವು ಸಂದು ಗೊಂದಿಲಿ
ಆಕಳು ಕಟ್ಟುವ ಗೋದಾನಿಯಲಿ |
ಸೆಳೆದು ದಂಟುಗಳ ಹಾಕುತ್ತಿರು- ವಾಗ
ಸುಳಿವು ಕಂಡ್ಹಿಡಿದ ರಾಕ್ಷಣದಿ || 55 ||
ಸಿಕ್ಕಾರು ನಮ್ಮ ಅತ್ತೆಯವರು ಎಂದೆಬ್ಬಿಸುತಲಿ |
ಹಸ್ತ ಹಿಡಿದು ಕರೆತಂದೇವ್ |
ಉಕ್ಕುವ ಉರಿಮೋರೆಯನೆ ನೋಡಿ
ಮನದಾ ಸಿಟ್ಟೇನೆನುತಾ ಕೇಳಿದರು || 56 ||
ಹೇಳುವದೇನು ಕೇಳುವದೇನು ನಿಮಗಿಂಥಾ |
ಎಳ್ಳು ಆದೆನೆ ನಾನೆಂದೆನುತಾ |
ಜೋಳದನ್ನವ ಕಾಣದೇ ನಾ ಬಂದೇನೆ
ನಾಳೆ ಪೋಗುವೆ ನಮ್ಮ ಮನೆಗೆ || 57 ||
ಭಕ್ಷ್ಯ ಪಾಯಸ ಮಾಡಿ ನಿನ್ನಿನ ದಿವಸ
ಈವತ್ತೇ ದುರ್ಭಿಕ್ಷದಡಿಗೆಯು |
ಭಿಕ್ಷಕ್ಕೆ ಬಂದೆನೆ ನಿಮ್ಮ ಮನೆಗೆ ನಾನು |
ಆ ಕ್ಷಣ ಜಲವ ತುಂಬಿದಳು || 58 ||
ಅಕ್ಕನ ವಚನವ ಕೇಳಿ ಆಲೋಚಿಸಿ |
ನಕ್ಕಳು ತನ್ನ ಮನದಲ್ಲಿ |
ಶುಕ್ರವಾರದ ಗೌರಿ ಮಾಡದೇ ನೀವಿಂಥ
ದುಃಖಕ್ಕೆ ಗುರಿಯಾದಿರೆಂದು || 59 ||
ಬರುವ ಕಾಲದಲ್ಲಿ ಕರೆದು ನಮ್ಮಮ್ಮನು |
ಅರುಹಲಿಲ್ಲವೇ ಗೌರಿಯನ್ನು |
ಸಿರಿಯು ಸಂಪತ್ತನ್ನು ಕೊಡುವಂಥ
ಶನಿವಾರ ಮರೆತು ಬಿಟ್ಟೇನೆ ಅಕ್ಕಯ್ಯಾ || 60 ||
ಲಕ್ಷುಮೀ ದೇವಿಯ ಅಲಕ್ಷ್ಯ ಮಾಡಿದ್ದರಿಂದ
ಈಕ್ಷಕ್ಕೆ ಬಂದು ತೊಲಗಿದಿರಿ |
ಈ ಕ್ಷಣ ನಮ್ಮ ಮನೆಯಲ್ಲಿ ಪೂಜಿಸೆ |
ಸಾಕ್ಷಾತ್ ಶ್ರೀಗೌರಿಯನ್ನು || 61 ||
ಎರೆದು ಪೀತಾಂಬರ ಉಡಿಸಿ ತಂದಿಟ್ಟರೆ |
ಪರಿಪರಿ ವಸ್ತ್ರಾಭರಣ |
ವರ ಮಣೆಯಮೇಲೆ ಮಂಟಪದೋಳು ಚಟ್ಟಂಗಿ |
ಬರೆದಿಟ್ಟರಾಗ ಪೀಠದಲಿ || 62 ||
ಮುಂದೆ ಕಟ್ಟಿಸಿದರು ಮಕರ ತೋರಣಗಳ |
ದುಂದುಭಿ ಭೇರಿ ಹೊಡೆದವು |
ಮಿಂದು ಮುತ್ತೈದೇರು ಸಹಿತ ಬ್ರಾಹ್ಮಣರೆಲ್ಲ
ಅಂದರು ವೇದೋಕ್ತ ಮಂತ್ರಗಳ ||63||
ಹಾಕಿದರೈದು ಫಲಗಳಕ್ಕಿ ಅದರೋಳು
ನಾಲ್ಕೆಂಟು ನಂದಾದೀವಿಗೆಯ |
ಶ್ರೀ ಕಮಲ ಮಧ್ಯದಲ್ಲಿ ಸ್ಥಾಪನೆ ಮಾಡಿ |
ಅನೇಕ ಭಕ್ತಿಂದಾ ಕುಳಿತು || 64 ||
ಅರಿಶಿಣ ಪಿಡಿದು ಹಚ್ಚುತಲಿ ಶ್ರೀಗೌರಿಗೆ
ಸರಕಾನೆ ತಿರುವೆ ಮೋರೆಯನು |
ಎಡ- ಕ್ಹೋಗಿ ಎರಡು ಕೈಮುಗಿದ್ಹೇಳಿಕೊಂಡರೆ
ಬಲಕೆ ಬಂದಳು ಭಾಗ್ಯಲಕ್ಷ್ಮೀ || 65 ||
ಮಕ್ಕಳು ಮಾಡುವ ಮಹಾತಪ್ಪು
ಅಪರಾಧ ಹೆತ್ತ ಮಾತೆಯರೆಣಿಸುವರೆ |
ಸತ್ಯವಂತಳು ಈಕೆ ಸಮರಿಲ್ಲವೆನುತಲಿ
ಭಕ್ತಿಯಿಂದಲಿ ಕರವ ಮುಗಿದರು || 66 ||
ಕಡಲಾಂಬುವಾಸನ ಮಡದಿ ಮಹಾಲಕ್ಷ್ಮೀಗೆ
ಒಡೆದ ತೆಂಗಿನಕಾಯಿ ಫಲವು|
ಮಡದಿಯರಿಗೆ ಅರಿಶಿಣ ಗಂಧ ಕುಂಕುಮ
ಕೊಡುತ ಪುಷ್ಪಗಳುಡಿತುಂಬೆ || 67 ||
ಬಟ್ಟ ಮುತ್ತಿನ ಹರಿವಾಣದೊಳ್ ನೈವೇದ್ಯ |
ಭಕ್ಷ್ಯ ಪಾಯಸ ಬಡಿಸಿದರು |
ಸಂತುಷ್ಟಿಯಿಂದ ನೋಡುತಲಿ
ಧೇಯಕ್ಕಗೆ ಅಷ್ಟೈಶ್ವರ್ಯ ನೀಡಿದಳು || 68 ||
ದುಂಡುಮುತ್ತಿನ ಹರಿವಾಣದೊಳ್ ನೈವೇದ್ಯ |
ಮಂಡಿಗೆ ತುಪ್ಪ ಸಕ್ಕರೆಯು |
ಕಂಡು ಸಂತೋಷ ದಿಂದಾಗ
ಧೇಯಕ್ಕನ ಗಂಡಗೆ ರಾಜ್ಯ ನೀಡಿದಳು || 69 ||
ಹೊಳೆವ ಚಿನ್ನದ ಹರಿವಾಣದೊಳ್
ಕಡಬು ಕಟ್ಟಂಬಲಿ ಬಡಿಸಿ |
ತರಿಸಿದೆಳ್ಳೆಣ್ಣೆ ಹಿಂಡಿಯ ಪಲ್ಯ ತಾಂಬೂಲ |
ನಲಿನಲಿದಾಡಿ ನೋಡುತಲಿ || 70 ||
ಅಕ್ಕ ತಂಗಿಯರಾಗ ಜೊತೆಯಲಾರತಿ
ಎತ್ತಿ ಮುತ್ತೈದೆ- ಯರು ಹಾಡುತಲಿ |
ಉತ್ತಮಾಂಗನಿಗೆ ಮಂತ್ರಾಕ್ಷತೆಗಳ ಹಾಕಿ |
ಎತ್ತಿದಾರತಿ ಇಳಿಸಿದರು || 71 ||
ಉಂಡರು ಸಕಲ ಜನರು ಸಹಿತಾಗಿ
ತಕ್ಕೊಂಡು ಕರ್ಪುರದ ವಿಳ್ಯಗಳ |
ಉಂಡು ಸಂತೋಷದಿಂದಾಗ ಕೂತಿರಲು |
ಬಂದೆರಗಿದರು ಬಾಲಕರು || 72 ||
ಅರಸು ತಾನಾಗಿಯೇ ಬಂದನೇ
ನಮ್ಮಯ್ಯನು ಕರೆಸಿದ ನಿಮ್ಮ ನೆಂದೆನುತ |
ಹರುಷದಿಂದವರ ಮಾತುಗಳ
ಕೇಳ್ಯಾನಂದ ಭರಿತರಾದರು ಮನೆಯಲ್ಲಿ || 73 ||
ಗಡಗಡನಾಗ ಬಂದವು ತೇಜಿ ರಥಗಳು |
ನುಡಿದವು ಭೇರಿ ವಾದ್ಯಗಳು |
ಸಡಗರದಿಂದುಡುಗೋರೆ ವಿಳ್ಯವ ಕೊಟ್ಟು
ನಡೆದರು ತಮ್ಮ ಮಂದಿರಕೆ || 74 ||
ಅಕ್ಕತಂಗಿಯರು ಅಂದಣವೇರಿ
ಕೊಂಡು ಪಲ್ಲಕ್ಕಿಯೊಳಗೆ ಕುಳಿತುಕೊಂಡು |
ಅರ್ತಿಯಿಂದಲಿ ಚಾಮರ ಬೀಸುತಲಿ
ತಮ್ಮ ಪಟ್ಟಣಕ್ಕೆ ನಡೆತಂದರು || 75 ||
ಆ ಗೋಪಾಲ ತಂದಾಗ ಕೈಯಲಿ ಕೊಡೆ |
ಈ ಕೋಲು ನಿಮ್ಮದೆಂದೆನುತ |
ಹಾಕಿತು ಕಾಗೆ ಹಣದ ಬುತ್ತಿಯ ಗಂಟನು |
ಸ್ವೀಕರಿಸಿದ- ನೊಬ್ಬ ಸುತನು || 76 ||
ಮಡುವಿನೊಳಗೆ ಮುಳುಗಿ ಏಳುತಿರುವುದ ಕಂಡು |
ಬುರುಡೆ ಹಣವ ಕೈಯ್ಗೊಂಡು |
ನಡೆವ ಮಾರ್ಗದೊಳಗೆ ಹಾವಿಗೆ ಕಂಡು |
ಹಿಡಿದುಕೊಂಡ್ಹಿಗ್ಗಿ ನಡೆದರು || 77 ||
ದಡದಡನಾಗ ಬಂದವು ಮಳೆಗಳು |
ಸಿರಿ ತೊಯ್ಯಲಾಗದೆಂದೆನಲು |
ಹರದೇರಿಬ್ಬರು ಸೆರಗನೇ ಮರೆಮಾಡಿ |
ಕರೆತಂದರಾ ತೋಟದಲಿ || 78 ||
ಒಂದು ಘಳಿಗೆ ಸ್ಥಳವನೆ ಮಾಡಿ ಕೊಟ್ಟರೆ
ಬಂದೀತು ಬಹಳ ಪುಣ್ಯಗಳು |
ಹಾಗೆಂದ ಮಾತಿಗೆ ತಾನೊಳಗಿನಿಂದ ಬಂದು |
ಇಲ್ಲೆಲ್ಲಿ ಸ್ಥಳವು ಹೋಗೆಂದಾ || 79 ||
ಮನ್ನಿಸಿ ಕರೆದು ಮುದ್ದಿಸಿ ಮಹಾಲಕ್ಷೀ
ದೇವಿಗೆ ಸ್ಥಳ ಮಾಡಿ ಕೊಟ್ಟು |
ಮತ್ತೆ ನೀವೀಗ ಕೋಪಿಸಲಾರದೀ
ಗೌರಿ ಭಕ್ತಿಯಿಂದಲಿ ಕರವ ಮುಗಿದಳು || 80 ||
ಎತ್ತಲ ಗೌರಿ ಎಲ್ಲಿಯ ದ್ರೋಹ ನಮಗಿನ್ನು
ಪತ್ನಿಯ ಕರೆದು ಕೇಳಿದನು |
ಸತ್ಯವಂತಳು ಆಕೆ ಸಮರಿಲ್ಲವೆನುತಲಿ |
ಭಕ್ತಿಯಿಂದಲಿ ಕರವ ಮುಗಿದಳು || 81 ||
ಹಿಂದಕ್ಕೆ ಸೋಮೇಶಮ್ಮಾನ ಮನೆಯಲ್ಲಿ |
ನಿಂದೆ ಮಾಡಿದೆ ಗೌರಿಯನ್ನು |
ಬಂದಿತು ನಮಗೆ ವನವಾಸ ವೆಂದೆನುತಲಿ |
ಗಂಡಗೆ ತಿಳಿ ಹೇಳಿದಳು || 82 ||
ಜಾತವಾದರು ಪಾರಿಜಾತ ವನದಾಗೆ |
ಅನಾಥರನ್ನ ಮಾಡಿ ಬಂದೆ |
ಪ್ರೀತಿಯಿಂದಲಿ ಸಲಹಿದವರ್ ಯಾರೆಂದು |
ಆ ತಾಯಿ ಸುತರ ಕೇಳಿದಳು || 83 ||
ತುಲಸಿಗೆನುತ ಬಂದ ಸೋಮೇಶಭಟ್ಟನು |
ಗಳಿಸಿಕೊಂಡೊಯ್ದ ನಮ್ಮನ್ನ |
ಬೆಳೆಸಿ ಎರೆದನೆ ಧಾರೆ ಅರಸು ಪ್ರಧಾನಿಗೆ |
ಕಳಿಸಿದನಾಗ ಸಂಭ್ರಮದಿ || 84 ||
ಅಕ್ಕರೆಯಿಂದ ಪೇಳಿದಳು ಸೋಮೇಶಮ್ಮ |
ಶುಕ್ರವಾರದ ಗೌರಿಯನ್ನು |
ಮಕ್ಕಳು ಸೊಸೆಯರು ಇದು ಎಲ್ಲ
ಸೋಮೇಶಭಟ್ಟನ ಪುಣ್ಯವಿದೆಂದು || 85 ||
ಹಿಂದಾಗಲೊನವಾಸ ಮುಂದ್ಯಾಕೆ- ನುತಲಿ |
ತಂದು ಕೊಟ್ಟರು ಉಡುಗೊರೆಯ |
ಮುಂಗಯ್ಯ ಹಿಡಿದು ಮುಪ್ಪಿನ ತಾಯಿ ತಂದೇರ |
ಅಂದಣವನೇರಿಸಿದರು || 86 ||
ಭೋರೆಂಬೋ ನದಿಯ ದಾಟುತಲಿ ಕಟ್ಟಿಸಿದರು |
ಊರ ಬಾಗಿಲಿಗೆ ತೋರಣವ |
ಭೇರಿ ನಗಾರಿ ತುತ್ತೂರಿ ವಾದ್ಯಗಳಿಂದ |
ಸಾಲು ದೀವಟಿಗೆ ಸಂಭ್ರಮದಿ || 87 ||
ಹಾಸುತ ನಡೆಮುಡಿ ಒಳಕದಲಾರತಿ |
ಬೀಸುತ್ತ ಬಿಳಿಯ ಚಾಮರವಾ |
ಸೋಸಿಲಿಂದಲಿ ಕರೆತಂದರ್ ಅರಮನೆಗೆ |
ಸಿಂಹಾಸನದಳೊಪ್ಪಿರೋ ಮಹಾಲಕ್ಷ್ಮೀಗೆ || 88 ||
ಅರಳು ಪೂಗಂಧ ಕುಂಕುಮವ ನಾರಿಯರು |
ಹರಿವಾಣದೊಳು ತಂದಿರಿಸಿ |
ಪರಿಪರಿಯಲಿ ಸರ್ವಾಂಗ ಪೂಜೆಯ ಮಾಡಿ |
ಫಲಗಳನೊಪ್ಪಿಸಿ ಕೈಯ ಮುಗಿಯೇ || 89 ||
ಬಿತ್ತಿದ ಬೆಳೆರಾಶಿ ಉಕ್ಕುವ ಧನಧಾನ್ಯ |
ಉಕ್ಕುವಂದದಿ ಕ್ಷೀರರಸವು |
ಲೆಕ್ಕವಿಲ್ಲದೇ ಮಕ್ಕಳಾಗೋರು ಮನೆತುಂಬ |
ಮುತ್ತೈದೆತನವ ನೀಡುವಳು || 90 ||
ತಾ ಸುರಕಾಮಧೇನು ಎಂದೆನಿಸಿ
ಭೀಮೇಶಕೃಷ್ಣನು ಸಹಿತಾಗಿ |
ಲೇಸಾಗಿದ್ದ ಸಂಪತ್ತನ್ನೆಲ್ಲ ಕೊಟ್ಟು
ವಾಸವಾದಳು ಮಹಾಲಕ್ಷ್ಮೀ || 91 ||
ಮಂಗಳಂ ಜಯವೆನ್ನಿ ಮಂಗಲಂ ಶುಭವೆನ್ನಿ |
ಮಂಗಳಾಂಗನೇ ಮಹಾಲಕ್ಷ್ಮೀ |
ಕಂಗಳು ತೆರೆದು ಕಟಾಕ್ಷದಿ ನೋಡಲು |
ಇಂಗೋದು ಸಕಲ ಪಾಪಗಳು ||
ಬರಡು ಕರೆಯಲಿ |
ಬಂಜೆಗೆ ಮಕ್ಕಳಾಗಲಿ |
ಕುರುಡಗೆ ಕಂಗಳು ಬರಲಿ |
ಬರ ಹರಿಯಲಿ |
ದಾರಿದ್ರ್ಯಗಳಿಂಗಲಿ
ಶ್ರೀ ಹರಿ ನಮ್ಮ ಹೃದಯದೊಳಗಿರಲಿ ||
ಶ್ರಾವಣ ಶನಿವಾರ ಹಾಡು
Frequently Asked Questions About Shravana Shanivara Hadu
ಶ್ರಾವಣ ಶನಿವಾರದ ಹಾಡಿನ ಇನ್ನೊಂದು ಹೆಸರು ಏನು?
ಶ್ರಾವಣ ಶನಿವಾರದ ಹಾಡಿನ ಇನ್ನೊಂದು ಹೆಸರು ‘ಸಂಪತ್ತು ಶನಿವಾರದ ಹಾಡು’
ಶ್ರಾವಣ ಶನಿವಾರದ ಹಾಡನ್ನು ಯಾರು ರಚಿಸಿದ್ದಾರೆ ?
ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ.
ಶ್ರಾವಣ ಶನಿವಾರದ ಹಾಡನ್ನು ಯಾರು, ಯಾವಾಗ ಹಾಡಬೇಕು?
ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಸಾಯಂಕಾಲ ಬಹಳ ಪ್ರಶಸ್ತವಾದ ಸಮಯ.
Pingback: ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics - Holagi ಹರನ ಕುಮಾರನ | ಶ್ರಾವಣ